ಸಾವಯವ ಕೃಷಿ ಮೂಲಕ ಆರೋಗ್ಯಕರ ಬೆಳೆ ಬೆಳೆಯುವ ರೈತರೊಬ್ಬರ ಯಶೋಗಾಥೆ
DD Chandana News
0:00 / 0:00
ಸಾವಯವ ಕೃಷಿ ಮೂಲಕ ಆರೋಗ್ಯಕರ ಬೆಳೆ ಬೆಳೆಯುವ ರೈತರೊಬ್ಬರ ಯಶೋಗಾಥೆ
552 просмотра · 2 недели назад
DD Chandana News
112 тыс. подписчиков
552 просмотра · 2 недели назад
ಕೃಷಿಯಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗುತ್ತಿರುವ ನಡುವೆ, ಸಾವಯವ ಕೃಷಿಯ ಮೂಲಕ ಆರೋಗ್ಯಕರ ಬೆಳೆ ಬೆಳೆಯುವ ಮೂಲಕ ರಾಮನಗರದ ರೈತರೊಬ್ಬರು ಮಾದರಿಯಾಗಿದ್ದಾರೆ. ತಮ್ಮ ಎಂಟು ಎಕರೆ ಜಮೀನಿನಲ್ಲಿ ಹಲವು ಬಗೆಯ ಹಣ್ಣು ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ಪ್ರಗತಿಪರ ರೈತ ಬಿ.ಸಿ. ವಾಸು, ಜೀವಾಮೃತ ಘಟಕವನ್ನೂ ಸ್ಥಾಪಿಸಿದ್ದಾರೆ. ಸಾವಯವ ಕೃಷಿಯಲ್ಲೇ ಉತ್ತಮ ಇಳುವರಿ ಪಡೆಯುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಈ ಕುರಿತ ವರದಿ….
V/O
ರಾಮನಗರದ ಬಿಳಗುಂಬ ಗ್ರಾಮದ ಪ್ರಗತಿಪರ ರೈತ ಹಾಗೂ ದೇವೇಗೌಡ ಪ್ರಶಸ್ತಿ ಪುರಸ್ಕೃತ ಬಿ.ಸಿ. ವಾಸು ತಮ್ಮ ಎಂಟು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಅಡಿಕೆ, ಕಾಫಿ, ಏಲಕ್ಕಿ, ಮೆಣಸು, ತೆಂಗು, ಹಲಸು, ಪರಂಗಿ, ಮಾವು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಿಶೇಷವೆಂದರೆ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಗೊಬ್ಬರ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡಿದ್ದಾರೆ.
ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಜೊತೆಗೆ, ಉತ್ತಮ ಇಳುವರಿ ಪಡೆಯುವ ಉದ್ದೇಶದಿಂದ ತಮ್ಮ ತೋಟದಲ್ಲೇ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ಜೀವಾಮೃತ ಘಟಕ ಸ್ಥಾಪಿಸಿದ್ದು, ಸಗಣಿ, ಗಂಜಲ, ಬೆಲ್ಲ, ಹಣ್ಣು-ತರಕಾರಿ ಸೇರಿದಂತೆ ವಿವಿಧ ಸಾವಯವ ಪದಾರ್ಥಗಳನ್ನು ಬಳಸಿ ಜೀವಾಮೃತವನ್ನು ತಯಾರಿಸಿ ತನ್ನ ತೋಟಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬೆಳೆದ ಹಣ್ಣುಗಳು ರುಚಿಯಾಗಿರುವುದಷ್ಟೇ ಅಲ್ಲದೇ ಆರೋಗ್ಯಕ್ಕೂ ಉತ್ತಮವಾಗಿರಲಿದೆ.
ಈ ಕುರಿತು ದೂರದರ್ಶನದೊಂದಿಗೆ ಬಿ.ಸಿ. ವಾಸು, ನಮ್ಮ ಬಳಿ ಸುಮಾರು ಎಂಟು ಎಕರೆ ಜಮೀನಿದೆ. ಅಡಿಕೆ, ಕಾಫಿ, ಏಲಕ್ಕಿ, ಮೆಣಸು, ತೆಂಗು, ಹಲಸು, ಪರಂಗಿ ಹಾಗೂ ಹಲವು ತಳಿಯ ಮಾವಿನ ಗಿಡಗಳಿವೆ. ನಮ್ಮ ಭೂಮಿ ಯಾವಾಗಲೂ ಸಾವಯವವಾಗಿರಬೇಕು ಎನ್ನುವುದು ನಮ್ಮ ಕನಸು. ಹಲವು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಸಾವಯವ ಕೃಷಿಗೆ ಪರಿವರ್ತನೆಯಾಗುವಾಗ ಮೊದಲು ಮಣ್ಣು ಮತ್ತು ನೀರನ್ನು ಪರೀಕ್ಷಿಸಬೇಕು. ಮಣ್ಣಿನ ಆರೋಗ್ಯವನ್ನು ಪುನರುಜ್ಜೀವನಗೊಳಿಸುವ ಕೆಲಸ ಆಗಬೇಕು. ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಗುಣಮಟ್ಟ ಸುಧಾರಿಸುತ್ತದೆ. ಕೊಟ್ಟಿಗೆ ಗೊಬ್ಬರದ ಜೊತೆ ಜೀವಾಣು ಗೊಬ್ಬರಗಳನ್ನು ಬಳಸಿ ಕೃಷಿ ಮಾಡಿದರೆ ಸಾವಯವದಲ್ಲೂ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಒಟ್ಟಾರೆ, ರಾಸಾಯನಿಕ ಕೃಷಿಯ ನಡುವೆ ಸಾವಯವ ಕೃಷಿಯತ್ತ ಮುಖ ಮಾಡಿರುವ ವಾಸು, ಬಹುಬೆಳೆ ಪದ್ಧತಿ, ಜೀವಾಮೃತ ಬಳಕೆ ಹಾಗೂ ನೈಸರ್ಗಿಕ ಕೃಷಿಯ ಮೂಲಕ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದು, ಇವರ ಸಮಗ್ರ ಕೃಷಿ ಪದ್ಧತಿ, ಇತರ ರೈತರಿಗೂ ಸಾವಯವ ಕೃಷಿಯತ್ತ ಹೆಜ್ಜೆ ಇಡಲು ಪ್ರೇರಣೆಯಾಗಿದೆ.
#LiveDDChandanaNews #DDChandanaNews #DDChandana #DDKannada