ಆಧುನಿಕತೆ ನಡುವೆಯೂ ಉಳಿದ ಅಸ್ಮಿತೆ: ಮೂರು ಸಾವಿರ ಬೊಂಬೆಗಳೊಂದಿಗೆ ಸಾಂಸ್ಕೃತಿಕ ಲೋಕ ಅನಾವರಣ
DD Chandana News
0:00 / 0:00
ಆಧುನಿಕತೆ ನಡುವೆಯೂ ಉಳಿದ ಅಸ್ಮಿತೆ: ಮೂರು ಸಾವಿರ ಬೊಂಬೆಗಳೊಂದಿಗೆ ಸಾಂಸ್ಕೃತಿಕ ಲೋಕ ಅನಾವರಣ
293 просмотра · 10 часов назад
DD Chandana News
111 тыс. подписчиков
293 просмотра · 10 часов назад
ನವರಾತ್ರಿ ಎಂದರೆ ಶಕ್ತಿ ದೇವತೆಯ ಆರಾಧನೆ. ಭಕ್ತಿ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವದ ಆಚರಣೆಯಾಗಿದೆ. ಈ ನವರಾತ್ರಿಯಲ್ಲಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ, ದೇವಾನುದೇವತೆಗಳ ರೂಪಗಳನ್ನು ಅಲಂಕರಿಸುವುದು ವಿಶೇಷ. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬೊಂಬೆ ಹಬ್ಬದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದಂಪತಿ, ಮೂರು ಸಾವಿರಕ್ಕೂ ಹೆಚ್ಚು ಬೊಂಬೆಗಳ ಮೂಲಕ ಪೌರಾಣಿಕ ಲೋಕವನ್ನೇ ಸೃಷ್ಟಿಸಿದ್ದು, ಜನರ ಕಣ್ಮನ ಸೆಳೆಯುತ್ತಿದೆ. ಈ ಕುರಿತು ಒಂದು ವರದಿ...
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪೋರ್ಟರ್ ರಸ್ತೆಯಲ್ಲಿರುವ ನಾರಾಯಣಲಕ್ಷ್ಮಿ ಭವನದಲ್ಲಿ ನವರಾತ್ರಿ ಪ್ರಯುಕ್ತ ಕಂಗೊಳಿಸುತ್ತಿರುವ ಈ ಬೊಂಬೆ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. ಮಂಗಳಮ್ಮ ಹಾಗೂ ಕೃಷ್ಣಭಟ್ಟರ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಈ ಸಂಪ್ರದಾಯವನ್ನು ಶ್ರದ್ಧೆ, ಭಕ್ತಿ ಹಾಗೂ ಉತ್ಸಾಹದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಪ್ರದರ್ಶನ ನಡೆಯುತ್ತಿರುವ ನಾರಾಯಣಲಕ್ಷ್ಮಿ ಭವನದ ಪ್ರವೇಶದ್ವಾರದಲ್ಲಿ ಶಿವನ ಜಟೆಯಿಂದ ಧುಮ್ಮಿಕ್ಕುವ ಪವಿತ್ರ ಗಂಗೆಯ ದೃಶ್ಯ ಸ್ವಾಗತಿಸುತ್ತದೆ. ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗನಾಥಸ್ವಾಮಿ ದೇವಾಲಯದ ವೈಭವ ಸೇರಿದಂತೆ ಹಲವು ಆಕರ್ಷಕ ಕಲಾಕೃತಿಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಬೊಂಬೆಗಳನ್ನು ಹೊಂದಿರುವ ಕೃಷ್ಣಭಟ್ಟರ ಸಂಗ್ರಹವನ್ನು ಅಚ್ಚುಕಟ್ಟಾಗಿ ಜೋಡಿಸಲು ಬರೋಬ್ಬರಿ ಒಂದು ವಾರದ ಸಮಯ ಆಗಿದೆ. ಪಟ್ಟದ ರಾಜ-ರಾಣಿ, ತಿರುಪತಿ ತಿಮ್ಮಪ್ಪನ ಅಲಂಕಾರ, ಗೌರಿ, ಕುಂಭಕರ್ಣ, ಸತ್ಯನಾರಾಯಣ ಪೂಜೆ, ದಶಾವತಾರ, ಅಷ್ಟಲಕ್ಷ್ಮಿ ಹಾಗೂ ನವದುರ್ಗೆಯ ವೈಭವ ಇಲ್ಲಿನ ಪ್ರಮುಖ ಆಕರ್ಷಣೆಗಳು. ಪೌರಾಣಿಕ ಲೋಕ ಮಾತ್ರವಲ್ಲದೇ, ಜನಜೀವನದ ನೈಜ ಚಿತ್ರಣವೂ ಅನಾವರಣಗೊಂಡಿದೆ. ಅಲಮೇಲು ಬಜಾರ್, ಬಟ್ಟೆ ಅಂಗಡಿ, ಬೇಕರಿ, ದಿನಸಿ ಅಂಗಡಿ, ಹಣ್ಣು-ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳ ಮಾದರಿಗಳು ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುತ್ತವೆ.
ಮದುವೆಯ ದಿಬ್ಬಣ, ಮದುವಣಗಿತ್ತಿಯರ ಅಲಂಕಾರ, ಊಟದ ಪಂಕ್ತಿ, ಮದುವೆ ಮುಹೂರ್ತ ಹಾಗೂ ರಥೋತ್ಸವದ ದೃಶ್ಯಗಳು ನೋಡುಗರ ಗಮನ ಸೆಳೆಯುತ್ತವೆ. ಚನ್ನಪಟ್ಟಣದ ಮರದ ಬೊಂಬೆಗಳು ಸೇರಿದಂತೆ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ವಿಶಿಷ್ಟ ಬೊಂಬೆಗಳೂ ಪ್ರದರ್ಶನದಲ್ಲಿವೆ.
ದೂರದರ್ಶನದೊಂದಿಗೆ ಆಯೋಜಕ ಕೃಷ್ಣಭಟ್, ಸುಮಾರು 40 ವರ್ಷಗಳಿಂದ ಬೊಂಬೆ ಪ್ರದರ್ಶನದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವುದು, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ಪತ್ನಿ ಸರ್ವಮಂಗಳ, ಕಳೆದ ನಾಲ್ಕುದಶಕಗಳಿಂದ ಪ್ರದರ್ಶನ ಆಯೋಜಿಸುತ್ತಿದ್ದೇವೆ. ಸಾವಿರಾರು ಜನ ಬಂದು ವೀಕ್ಷಣೆ ಮಾಡುವುದರಿಂದ ಸಂತೋಷವಾಗಲಿದೆ ಎಂದರು.
ಕೆ.ಆರ್.ಪೇಟೆ ತಾಲೂಕಿನ ತಂಡೆಕರೆ ನಿವಾಸಿ ದೊರೆಸ್ವಾಮಿ, ಬೊಂಬೆ ಪ್ರದರ್ಶನವನ್ನು ನೋಡುವ ಸಲುವಾಗಿ ಮಕ್ಕಳೊಂದಿಗೆ ಆಗಮಿಸಿದ್ದೇವೆ. ಮಕ್ಕಳು ಇಂತಹ ಪ್ರದರ್ಶನ ವೀಕ್ಷಿಸುವುದರಿಂದ ಅವರಲ್ಲಿ ಪರಂಪರೆಯ ಕುರಿತು ಅರಿವು ಮೂಡಲಿದೆ ಎಂದರು.
ಮತ್ತೋರ್ವ ಸ್ಥಳೀಯ ನಂಜೇಗೌಡ, ನವರಾತ್ರಿ ಆಚರಣೆ ಹಾಗೂ ದಸರಾ ಬೊಂಬೆಗಳ ಪ್ರದರ್ಶನಕ್ಕೂ ಅವಿನಾಭಾವ ಸಂಬಂಧವಿದೆ. ಶತ ಶತಮಾನಗಳಿಂದಲೂ ಇದು ನಮ್ಮ ಮೈಸೂರು ಭಾಗದ ಒಂದು ಸಾಂಪ್ರದಾಯಿಕ ಅಸ್ಮಿತೆಯಾಗಿದೆ. ಶ್ರೀರಂಗಪಟ್ಟಣ ಮಾತ್ರವಲ್ಲದೆ ಅಸುಪಾಸಿನ ಗ್ರಾಮಗಳ ನೂರಾರು ಮಂದಿ ಪ್ರತಿದಿನ ಬಂದು ಬೊಂಬೆಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಒಟ್ಟಾರೆ, ಆಧುನಿಕತೆಯ ಭರಾಟೆಯ ನಡುವೆಯೂ ತಲೆಮಾರುಗಳಿಂದ ಬಂದ ಸಂಪ್ರದಾಯವನ್ನು ಜೀವಂತವಾಗಿರಿಸಿರುವ ಕೃಷ್ಣಭಟ್ ದಂಪತಿಯ ಪ್ರಯತ್ನ ಶ್ಲಾಘನೀಯ. ಸಾವಿರಾರು ಬೊಂಬೆಗಳ ಮೂಲಕ ಪೌರಾಣಿಕ ಕಥೆಗಳು, ಧಾರ್ಮಿಕ ನಂಬಿಕೆಗಳು ಹಾಗೂ ಜನಜೀವನದ ಚಿತ್ರಣವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟಿರುವ ಈ ಪ್ರದರ್ಶನ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಕೊಂಡಿಯಾಗಿದೆ.
#LiveDDChandanaNews #DDChandanaNews #DDChandana #DDKannada