ಅರಣ್ಯೀಕರಣದ ಹಾದಿ.. ವೃಕ್ಷೋದ್ಯಾನ ನಿರ್ಮಾಣದ ಮೂಲಕ ಹಸಿರು ಹೆಚ್ಚಳ
DD Chandana News
0:00 / 0:00
ಅರಣ್ಯೀಕರಣದ ಹಾದಿ.. ವೃಕ್ಷೋದ್ಯಾನ ನಿರ್ಮಾಣದ ಮೂಲಕ ಹಸಿರು ಹೆಚ್ಚಳ
75 просмотров · 4 дн. назад
DD Chandana News
112 тыс. подписчиков
75 просмотров · 4 дн. назад
ವಿಜಯಪುರ ಜಿಲ್ಲೆಯಲ್ಲಿ ಹಸಿರೀಕರಣದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಅರಣ್ಯೀಕರಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇದೀಗ ಮುದ್ದೇಬಿಹಾಳ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ವೃಕ್ಷೋದ್ಯಾನ ಜಿಲ್ಲೆಯ ಹಸಿರ ಸೊಬಗು ಹೆಚ್ಚಿಸುವ ಭರವಸೆ ಮೂಡಿಸಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.
ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣದ ಆಶಯದೊಂದಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ 38 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಸುಂದರ ಉದ್ಯಾನವನ ಹಸಿರ ಆಕರ್ಷಣೆಯೊಂದಿಗೆ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ.
2016ಕ್ಕೂ ಮುನ್ನ ಜಿಲ್ಲೆಯಲ್ಲಿ ಹಸಿರು ಹೊದಿಕೆಯ ಪ್ರಮಾಣ ಕೇವಲ ಶೇಕಡ 0.17ರಷ್ಟಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ ಬಿ ಪಾಟೀಲ್ ಇದನ್ನು ಮನಗಂಡ ಕೂಡಲೇ ಅರಣ್ಯ ಹೆಚ್ಚಳಕ್ಕೆ ಮುತುವರ್ಜಿ ವಹಿಸಿದರು. ಅಂದಿನಿಂದಲೇ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಯಿತು. ಈಗ ಜಿಲ್ಲೆಯಲ್ಲಿ ಹಸಿರು ಹೊದಿಕೆಯ ಪ್ರಮಾಣ ಶೇಕಡ 2.4ಕ್ಕೆ ಏರಿಕೆಯಾಗಿರುವುದು ಗಮನಾರ್ಹ.
ಹಸಿರೀಕರಣದ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಇದೀಗ ಹಸಿರೀಕರಣದ ಜೊತೆಗೆ ಪ್ರವಾಸಿಗರನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗುಡ್ಡದಲ್ಲಿ ಮನೋಹರ ವೃಕ್ಷೋದ್ಯಾನ ನಿರ್ಮಾಣ ಸಾಗಿದೆ. ಶಾಸಕ ಅಪ್ಪಾಜಿ ನಾಡಗೌಡ ಅವರ ನಿರಂತರ ಪ್ರಯತ್ನದ ಫಲವಾಗಿ 38 ಎಕರೆ ಭೂಮಿಯಲ್ಲಿ ಉದ್ಯಾನದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಉದ್ಯಾನಕ್ಕೆ ಸಾಲು ಮರದ ತಿಮ್ಮಕ್ಕ ಅವರ ಹೆಸರನ್ನು ನಾಮಕರಣ ಮಾಡಲು ನಿಶ್ಚಯಿಸಿರುವುದು ಮತ್ತೊಂದು ವಿಶೇಷ.
ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನದಲ್ಲಿ 3,500ಕ್ಕೂ ಹೆಚ್ಚು ವಿವಿಧ ಗಿಡಗಳ ಜೊತೆಗೆ 2500 ಔಷಧೀಯ ಗಿಡಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ.
ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಆಟದ ಮೈದಾನ, ವ್ಯಾಯಾಮ ಸೌಕರ್ಯ, ಆಹಾರ ಮಳಿಗೆ, ಯೋಗಭ್ಯಾಸಕ್ಕೆ ಪೂರಕ ವ್ಯವಸ್ಥೆ, ಪ್ರಾಣಿ-ಪಕ್ಷಿಗಳ ಚಿತ್ತಾಕರ್ಷಕ ಕೆತ್ತನೆ ಸೇರಿ ಪ್ರವಾಸಿಗರ ಮನ ಸೆಳೆಯುವ ಹತ್ತಾರು ಸಂಗತಿಗಳು ಉದ್ಯಾನವನದಲ್ಲಿ ಕೈಬೀಸಿ ಕರೆಯುತ್ತವೆ.
ದೂರದರ್ಶನದೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ತಾಲೂಕಿಗೊಂದು ಉದ್ಯಾನ ನಿರ್ಮಾಣ ಎಂಬ ಸರ್ಕಾರದ ಆಶಯದಂತೆ ಬಿದರಕುಂದಿಯಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದ್ದು, ಮುಕ್ತಾಯ ಹಂತಕ್ಕೆ ಸನಿಹದಲ್ಲಿದೆ. ಸಾರ್ವಜನಿಕ ಅನುಕೂಲಕ್ಕೆ ತಕ್ಕಂತೆ ಎಲ್ಲಾ ಸೌಲಭ್ಯಗಳು ಉದ್ಯಾನದಲ್ಲಿ ಇರಲಿದ್ದು, ಮುಂದಿನ ಎರಡು ತಿಂಗಳಲ್ಲಿ ವೃಕ್ಷೋದ್ಯಾನ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.
ರೈತ ಮುಖಂಡ ಸಂಗಮೇಶ, ವೃಕ್ಷೋದ್ಯಾನ ನಿರ್ಮಾಣ ಮೂಲಕ ಬರೋಬ್ಬರಿ 38 ಎಕರೆ ಪ್ರದೇಶದಲ್ಲಿ ಸಾವಿರಾರು ಗಿಡ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ಪ್ರಯತ್ನ ನಿರಂತರವಾಗಿ ಮುಂದುವರೆಯಬೇಕು ಎಂದರು.
ರೈತ ರಾಜೇಸಾಬ್ ನದಾಫ್, ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದ್ದು, ಉದ್ಯಾನ ನಿರ್ಮಾಣ ಕಾರ್ಯ ಸಂತಸದ ವಿಚಾರ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚಾಗಿ ಬರಪೀಡಿತ ಎಂಬ ಹಣೆಪಟ್ಟಿ ದೂರಾಗಲಿ ಎಂದು ಹೇಳಿದರು.
ರೈತ ರಾಮನಗೌಡ, ಜಿಲ್ಲೆಯಲ್ಲಿ ಐದು ನದಿಗಳು ಹರಿಯುವುದರಿಂದ ಪಂಚ ನದಿಗಳ ಬೀಡು ಎಂದು ಕರೆಯಲಾಗುತ್ತದೆ. ಹೀಗಿದ್ದರೂ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. ಇದೀಗ ಅರಣ್ಯ ಇಲಾಖೆ ಉದ್ಯಾನವನ ನಿರ್ಮಾಣ ಮಾಡುತ್ತಿರುವುದು ಮುಂದೆ ಈ ಭಾಗದಲ್ಲಿ ಉತ್ತಮ ಮಳೆಯಾಗಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯದ ಫಲಶೃತಿಯಾಗಿ ಜಿಲ್ಲೆಯಲ್ಲಿ ಹಸಿರು ವೃದ್ಧಿಸುತ್ತಿದೆ. ಇದೀಗ ವೃಕ್ಷೋದ್ಯಾನದ ನಿರ್ಮಾಣವು ಅರಣ್ಯೀಕರಣಕ್ಕೆ ಮತ್ತೊಂದು ಬಲ ತಂದುಕೊಟ್ಟಾಂತಾಗಿದೆ.
#LiveDDChandanaNews #DDChandanaNews #DDChandana #DDKannada