Перейти к содержимому

ಕಡಿಮೆ ನೀರು, ಅಧಿಕ ಲಾಭ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ರೇಷ್ಮೆ ಕೃಷಿ

DD Chandana News

0:00 / 0:00

ಕಡಿಮೆ ನೀರು, ಅಧಿಕ ಲಾಭ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ರೇಷ್ಮೆ ಕೃಷಿ

433 просмотра · 5 ч назад
DD Chandana News
111 тыс. подписчиков
433 просмотра · 5 ч назад
ರೇಷ್ಮೆ ಮತ್ತು ಹಾಲಿನ ನಗರಿ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆ, ರಾಜ್ಯದ ರೇಷ್ಮೆ ಉದ್ಯಮದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಸಾವಿರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿರುವ ರೇಷ್ಮೆ ಕೃಷಿ, ಇಂದು ಸಾಂಪ್ರದಾಯಿಕ ಪದ್ಧತಿಯಿಂದ ಆಧುನಿಕ ಕೃಷಿಯತ್ತ ಸಾಗುತ್ತಿದೆ. ರೈತರಿಗೆ ವೈಜ್ಞಾನಿಕ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಸರ್ಕಾರದ ಸಬ್ಸಿಡಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕುರಿತು ಒಂದು ವರದಿ. ಕೋಲಾರ ಜಿಲ್ಲೆಯ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ರೇಷ್ಮೆ ಕೃಷಿ. ಜಿಲ್ಲೆಯಲ್ಲಿ ಅಂದಾಜು 45 ಸಾವಿರಕ್ಕೂ ಅಧಿಕ ರೈತ ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರೇಷ್ಮೆ ಉದ್ಯಮವನ್ನು ಅವಲಂಬಿಸಿವೆ. ಹಿಪ್ಪುನೇರಳೆ ಬೆಳೆದು, ರೇಷ್ಮೆ ಹುಳುಗಳನ್ನು ಸಾಕಿ, ಗೂಡು ಉತ್ಪಾದಿಸುವ ಈ ಕೃಷಿ, ವರ್ಷದಲ್ಲಿ ಹಲವು ಬಾರಿ ಆದಾಯ ಗಳಿಸುವ ಅವಕಾಶ ಕಲ್ಪಿಸಿದೆ. ಕಡಿಮೆ ನೀರಿನಲ್ಲಿಯೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ರೇಷ್ಮೆ ಕೃಷಿ ಮಾಡಲು ಸಾಧ್ಯವಿರುವುದರಿಂದ, ಮಳೆಯಾಶ್ರಿತ ಪ್ರದೇಶದ ರೈತರಿಗೂ ಇದು ಉತ್ತಮ ಪರ್ಯಾಯವಾಗಿದೆ. ಕೋಲಾರ ಮತ್ತು ರಾಮನಗರ ಜಿಲ್ಲೆಗಳು ರಾಜ್ಯದ ರೇಷ್ಮೆ ಗೂಡಿನ ಉತ್ಪಾದನೆಯಲ್ಲಿ ಪ್ರಮುಖ ಪಾಲು ಹೊಂದಿವೆ. ರೇಷ್ಮೆ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಕೇವಲ ಪರಿಶ್ರಮವೊಂದೇ ಸಾಲದು. ವೈಜ್ಞಾನಿಕ ಪದ್ಧತಿ, ಗುಣಮಟ್ಟದ ಹಿಪ್ಪುನೇರಳೆ ಬೆಳೆ, ರೇಷ್ಮೆ ಹುಳುಗಳ ಸಮರ್ಪಕ ನಿರ್ವಹಣೆ ಹಾಗೂ ರೋಗಗಳ ನಿಯಂತ್ರಣವೂ ಅಷ್ಟೇ ಮುಖ್ಯ. ಇಂತಹ ಸಂದರ್ಭದಲ್ಲಿ ರೈತರಿಗೆ ಅಗತ್ಯವಾದ ತಾಂತ್ರಿಕ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕೇಂದ್ರವಾಗಿ ಕೋಲಾರದ ರೇಷ್ಮೆ ಗೂಡಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಮಾರುಕಟ್ಟೆಗೆ ಆಗಮಿಸುವ ರೈತರು, ಗೂಡಿನ ವಹಿವಾಟಿನ ಜೊತೆಗೆ ಕೃಷಿ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ವಿಜ್ಞಾನಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಈ ಕುರಿತು ದೂರದರ್ಶನದೊಂದಿಗೆ ರೇಷ್ಮೆ ಕೃಷಿಕ ಚಲಪತಿ, ರೇಷ್ಮೆ ಕೃಷಿಯಲ್ಲಿ ರೈತರು ಎದುರಿಸುವ ಸಮಸ್ಯೆಗಳಿಗೆ ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ. ಮಾರುಕಟ್ಟೆಯಲ್ಲಿ ಎಲ್ಲ ರೈತರೂ ಒಂದೆಡೆ ಸೇರುವುದರಿಂದ ಮಾಹಿತಿ ವಿನಿಮಯಕ್ಕೆ ಉತ್ತಮ ಅವಕಾಶವಿದೆ. ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಮಾಡುವುದು, ವೈಜ್ಞಾನಿಕವಾಗಿ ಕೃಷಿ ನಡೆಸುವುದು ಸೇರಿದಂತೆ ತೋಟದಿಂದ ಮಾರುಕಟ್ಟೆಯವರೆಗೆ ಬೇಕಾದ ಮಾಹಿತಿ ಇಲ್ಲಿ ಸಿಗುತ್ತದೆ ಎಂದು ತಿಳಿಸಿದರು. ರೈತ ಮಹಿಳೆ ಕೃಷ್ಣವೇಣಿ ಗೋವಿಂದನ್, ನಾವು ತಮಿಳುನಾಡಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದೇವೆ. ಕಳೆದ ನಾಲ್ಕೈದು ವರ್ಷಗಳಿಂದ ಕೋಲಾರದ ಮಾರುಕಟ್ಟೆಗೆ ಬರುತ್ತಿದ್ದೇವೆ. ಬೇರೆ ವೃತ್ತಿಗಳಿಗೆ ಹೋಲಿಸಿದರೆ ರೇಷ್ಮೆ ಕೃಷಿ ಉತ್ತಮ ಆದಾಯ ತಂದುಕೊಡುವ ಉದ್ಯಮವಾಗಿದೆ ಎಂದರು. ರೇಷ್ಮೆ ಕೃಷಿಕ ಅಶೋಕ್ ಕುಮಾರ್, ನಾವು ಮೊದಲಿನಿಂದಲೂ ಸಾಂಪ್ರದಾಯಿಕ ಪದ್ಧತಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದೆವು. ಈಗ ಆಧುನಿಕ ರೇಷ್ಮೆ ಕೃಷಿಯತ್ತ ಮುಖ ಮಾಡಿದ್ದೇವೆ. ಇದರಿಂದ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತಿದೆ.ಆಧುನಿಕ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸರ್ಕಾರದ ವಿವಿಧ ಸಹಾಯಧನ ಯೋಜನೆಗಳೂ ರೈತರಿಗೆ ನೆರವಾಗುತ್ತಿವೆ ಎಂದರು. ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಸತೀಶ್, ಹಿಪ್ಪುನೇರಳೆ ನಾಟಿ, ಆಧುನಿಕ ರೇಷ್ಮೆ ಹುಳು ಸಾಕಾಣಿಕೆ ಮನೆಗಳ ನಿರ್ಮಾಣ ಹಾಗೂ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಲು ಸರ್ಕಾರದಿಂದ ದೊರೆಯುವ ಸಹಾಯಧನದ ಕುರಿತು ರೈತರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ಕೋಲಾರ ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಎಸ್.ಎನ್. ಶ್ರೀನಿವಾಸ್, ರೇಷ್ಮೆ ಕೃಷಿಯಲ್ಲಿ ರೈತರಿಗೆ ಅಗತ್ಯವಿರುವ ವೈಜ್ಞಾನಿಕ ಮಾಹಿತಿ ನೀಡುವುದು ನಮ್ಮ ಮುಖ್ಯ ಉದ್ದೇಶ. ರೇಷ್ಮೆ ಹುಳುಗಳಿಗೆ ಬರುವ ರೋಗಗಳು ಮತ್ತು ಹಿಪ್ಪುನೇರಳೆ ಗಿಡಗಳಲ್ಲಿನ ರೋಗಗಳ ನಿರ್ವಹಣೆ ಕುರಿತು ವಿಜ್ಞಾನಿಗಳು ಸೂಕ್ತ ಸಲಹೆ ನೀಡುತ್ತಾರೆ. ರೈತರು ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಸೇರುವುದರಿಂದ, ರೈತರಿಂದ ರೈತರಿಗಾಗಿ ಮಾಹಿತಿ ಹಂಚಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಸಹಕಾರಿಯಾಗುತ್ತಿದೆ ಎಂದರು. ** ಒಟ್ಟಾರೆ, ಕೋಲಾರದ ರೇಷ್ಮೆ ಗೂಡಿನ ಮಾರುಕಟ್ಟೆ ಕೇವಲ ಖರೀದಿ ಮತ್ತು ಮಾರಾಟದ ಕೇಂದ್ರವಾಗಿ ಉಳಿದಿಲ್ಲ. ಅದು ರೈತರ ಅನುಭವ, ವಿಜ್ಞಾನಿಗಳ ಸಂಶೋಧನೆ ಹಾಗೂ ಸರ್ಕಾರದ ಇಲಾಖೆಗಳ ಮಾರ್ಗದರ್ಶನ ಒಂದೆಡೆ ಸೇರುವ ವೇದಿಕೆಯಾಗಿದೆ. ಸಾಂಪ್ರದಾಯಿಕ ಕೃಷಿಗೆ ವೈಜ್ಞಾನಿಕ ತಂತ್ರಜ್ಞಾನದ ಬೆಂಬಲ ದೊರೆತಾಗ, ರೈತರ ಆದಾಯ ಹೆಚ್ಚಿಸುವುದರ ಜೊತೆಗೆ ರೇಷ್ಮೆ ಉದ್ಯಮದ ಗುಣಮಟ್ಟವನ್ನೂ ಉತ್ತಮಪಡಿಸಬಹುದು ಎಂಬುದಕ್ಕೆ ಕೋಲಾರದ ಈ ಪ್ರಯತ್ನ ಸಾಕ್ಷಿಯಾಗಿದೆ. #LiveDDChandanaNews #DDChandanaNews #DDChandana #DDKannada